ಬಾಹ್ಯ ಉಲ್ಲೇಖಗಳು :
1. ಯೌಟ್ಯೂಬ್ ವಿಡಿಯೋ : ಡಾ।। ವೇಣುಗೋಪಾಲ್ ಅವರಿಂದ ವಿವಿಧ ತಳಿಗಳ ಬಗ್ಗೆ ಮಾಹಿತಿ
2. ICAR-IISR ಬಿಡುಗಡೆ ಮಾಡಿದ ತಳಿಗಳು (ಇಂಗ್ಲಿಷ್ ಭಾಷೆಯಲ್ಲಿದೆ)
ಸಸಿಮಡಿಯ ಮಿಶ್ರಣ ತಯಾರಿಕೆ :
ಸಸಿಮಡಿಯ ಮಿಶ್ರಣವನ್ನು 2 ಭಾಗ ಫಲವತ್ತಾದ ಮೇಲ್ಮಣ್ಣು, 1 ಭಾಗ ರೇವೆ ಮಣ್ಣು ಅಥವಾ ಮರಳು ಮತ್ತು ಒಂದು ಭಾಗ ಕೊಟ್ಟಿಗೆ ಗೊಬ್ಬರ ಇವುಗಳನ್ನು ಬೆರೆಸಿ ತಯಾರಿಸಬೇಕು (2:1:1)
ಸೂರ್ಯ ಶಾಖದಿಂದ ಮಿಶ್ರಣವನ್ನು ಉಪಚರಿಸುವದು (Solarization):
ಸಸಿಮಡಿ ಮಿಶ್ರಣವನ್ನು 1ಮೀ ಅಗಲ 25 ಸೆಂ. ಮೀ. ಎತ್ತರ ಮತ್ತು ಅನುಕೂಲಕರ ಉದ್ದದಲ್ಲಿ (ಕಾಂಕ್ರೀಟ್ ನೆಲದ ಮೇಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಹರಡಿ) ಮಡಿ ತಯಾರಿಸಬೇಕು.
ಈ ಮಡಿಗಳು ಪ್ರಖರವಾದ ಸೂರ್ಯ ಪ್ರಕಾಶಕ್ಕೆ ಒಳಪಡುವ ಸ್ಥಳದಲ್ಲಿರಬೇಕು. ಈ ಮಡಿಗಳನ್ನು ಒದ್ದೆಮಾಡಿ ಒಳಭಾಗದಲ್ಲಿ ಹವೆಯಾಡಲು ಅವಕಾಶವಿಲ್ಲದ ರೀತಿಯಲ್ಲಿ ಪಾರದರ್ಶಕವಾದ 1೦೦-150 ಗೇಜಿನ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು.
ಈ ಮಡಿಗಳ ಎಲ್ಲ ಬದಿಗಳಲ್ಲೂ ಕಲಸಿದ ಮಣ್ಣನ್ನು ಮೆತ್ತಿ ಗಾಳಿಯಾಡದಂತೆ ಮಾಡಬೇಕು. ಇದರಿಂದ ಮಡಿಯ ಒಳಭಾಗದಲ್ಲಿ ಉಷ್ಣತೆ ಅಧಿಕಗೊಂಡು ಮಿಶ್ರಣವು ಸೌರಶಾಖದ ಪ್ರಕ್ರಿಯೆಗೆ ಒಳಪಡುವದು.
35-45 ದಿನಗಳ ಶಾಖ ಪ್ರಕ್ರಿಯೆ ಬಳಿಕ, ಮುಚ್ಚಿದ ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆಯಬೇಕು. ಈ ಕ್ರಿಯೆಯಿಂದ ಮಣ್ಣಿನಲ್ಲಿರುವ ರೋಗಾಣುಗಳು ಕೀಟಗಳು ಹಾಗೂ ಕಳೆಬೀಜಗಳು ನಾಶವಾಗುವವು.
ಪ್ರಾತ್ಯಕ್ಷಿಕೆಗಾಗಿ ನೋಡಿ : TMS ಮೆಣಸಿನ ವಿಡಿಯೋ - ನರ್ಸರಿ
ಮಿಶ್ರಣವನ್ನು ಜೈವಿಕ ಪೀಡೆನಾಶಕಗಳಿಂದ ಉಪಚರಿಸುವದು :
ರೋಗಾಣುಗಳ ಸೋಂಕು ತಗಲದಂತಾಗಲು ಈ ಮಿಶ್ರಣಕ್ಕೆ ನಂತರ ಜೈವಿಕ ನಿಯಂತ್ರಕಗಳನ್ನು ಸೇರಿಸಬೇಕು. ಅವು ಯಾವವೆಂದರೆ
VAMನ್ನು ೧ ಕಿಲೋ ಸಸಿಮಡಿ ಮಿಶ್ರಣಕ್ಕೆ ೧೦ ಗ್ರಾಂ ಪ್ರಮಾಣದಲ್ಲಿ ಪೊಚೊನಿಯಾ ಕ್ಲಾಮಿಡೊಸ್ಪೊರಿಯಾ ( ೧-೨ ಗ್ರಾಂ / ೧ ಕಿಲೋ ಸಸಿಮಡಿ ಮಿಶ್ರಣಕ್ಕೆ) ಸೇರಿಸಬೇಕು
ಈ ಸಸಿಮಡಿ ಮಿಶ್ರಣವನ್ನು ೮ x ೫ ಸೆಂ. ಮೀ. ಅಳತೆಯ ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ತುಂಬಬೇಕು ಮತ್ತು ಇವಕ್ಕೆ ನೀರು ಸರಾಗವಾಗಿ ಬಸಿದು ಹೋಗುವಂತೆ ಬುಡದಲ್ಲಿ ಸಾಕಷ್ಟು ರಂಧ್ರಗಳಿರಬೇಕು.
ಮೆಣಸಿನ ಕುಡಿಗಳ ತಯಾರಿ:
ಅಕ್ಟೋಬರ್-ಡಿಸೆಂಬರ್ ತಿಂಗಳಲ್ಲಿ ತಾಯಿ ಬಳ್ಳಿಯ ಬುಡದಿಂದ ಹೊರಟ ಕುಡಿ ಬಳ್ಳಿಯನ್ನು ಮೇಲೆತ್ತಿ ಸುರಳಿ ಮಾಡಿ ಒಂದು ಗೂಟಕ್ಕೆ ಸಿಕ್ಕಿಸಬೇಕು. ಇದರಿಂದ ಬಳ್ಳಿ ನೆಲದಲ್ಲಿ ಬೇರೊಡೆಯದಂತಾಗುವದು ಮತ್ತು ನೆಲದಿಂದ ಸೋಂಕು ತಗಲದಂತಾಗುವದು.
ಫೆಬ್ರವರಿ - ಮಾರ್ಚ್ ತಿಂಗಳಲ್ಲಿ ಅವನ್ನು ತಾಯಿ ಬಳ್ಳಿಯಿಂದ ಪ್ರತ್ಯೇಕಿಸಬೇಕು. ಈ ಕುಡಿಬಳ್ಳಿಯ ಮಧ್ಯ ಭಾಗದ ಬಳ್ಳಿಯನ್ನು ನೆಡಲು ಆಯುವುದು ಉತ್ತಮ. ತೀರಾ ಎಳೆಯದಾದ ಅಥವಾ ತುಂಬಾ ಬೆಳೆದ ಭಾಗಗಳನ್ನು ಆಯ್ಕೆ ಮಾಡಬಾರದು.
ಈ ಬಳ್ಳಿಗಳನ್ನು ೧-೨ ಗಣ್ಣುಗಳಿರುವಂತೆ ಕತ್ತರಿಸಬೇಕು. ಎಲೆಯ ಬುಡದ ದಂಟಿನ ಸ್ವಲ್ಪ ಭಾಗ ಬಿಟ್ಟಿರುವಂತೆ ಎಲೆಗಳನ್ನು ಚಿವುಟಿ ತೆಗೆಯಬೇಕು. ಬಳ್ಳಿಯ ತುಂಡುಗಳನ್ನು ಕಾರ್ಬಂಡೇಜಿಂ (೨ ಗ್ರಾಂ /ಲೀಟರ್) ಅಥವಾ ಸುಡೋಮೋನಾಸ್ ಫ್ಲೋರೆಸೆನ್ಸ್ ದ್ರಾವಣದಲ್ಲಿ (೨೫೦ ಗ್ರಾಂನ್ನು ೭೫೦ ಮಿಲಿ ನೀರಿಗೆ ಸೆರಿಸಿದ ರಾಡಿ) ೨೦ ನಿಮಿಷ ಕಾಲ ಅದ್ದಿ ತೆಗೆಯಬೇಕು. ಈ ರೀತಿ ಸಂಸ್ಕರಿಸಿದ ೨-೩ ತುಂಡುಗಳನ್ನು ಬೇರು ಪ್ರಚೋದಕ (root promoter - 1000 ppm) ಹಚ್ಚಿ ಪ್ರತಿ ಕೊಟ್ಟೆಯಲ್ಲಿ ನೆಡಬೇಕು. ಒಂದು ಗಣ್ಣಿನ ಕುಡಿಯನ್ನೂ ನೆಡಬಹುದು. ಹೀಗೆ ಮಾಡಿದಲ್ಲಿ ಬೇರು ಮತ್ತು ಚಿಗುರುಗಳೆರಡೂ ಒಮ್ಮಲೇ ಬರುವದು.
ಕುಡಿಗಳನ್ನು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ನೆಡುವದು:
ಫೆಬ್ರುವರಿ ತಿಂಗಳಿನಲ್ಲಿ ಕುಡಿಗಳನ್ನು ಕನಿಷ್ಠ ಒಂದು ಗಣ್ಣಾದರೂ ಮಣ್ಣಿನೊಳಗೆ ಇರುವಂತೆ ೮ x ೫ ಸೆಂ. ಮೀ. ಅಳತೆಯ ಪ್ಲಾಸ್ಟಿಕ್ ಕೊಟ್ಟೆಗಳಲ್ಲಿ ನೆಡಬೇಕು.
ಹೀಗೆ ನೆಟ್ಟ ಕುಡಿಗಳನ್ನು ಎಲ್ಲ ಬದಿಯಿಂದ ಮುಚ್ಚಿರುವ ಪಾರದರ್ಶಕ ಹಾಳೆ ಹೊದೆಸಿದ ತೇವಯುಕ್ತ ಗೂಡಿನಲ್ಲಿ ೨೦ ದಿನಗಳ ಕಾಲ ಇರುವಂತೆ ಮಾಡಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿ ಒಡೆಯುವದು ಮತ್ತು ಪ್ರಾರಂಭದಲ್ಲಿ ಸಸಿ ಬೆಳೆವಣಿಗೆಗೆ ಸಹಾಯಕಾರಿಯಾಗುವದು.
ಕುಡಿ ನೆಟ್ಟ ಮೇಲೆ ಸಸಿಗಳಿಗೆ ಚೆನ್ನಾಗಿ ನೆರಳು ಇರುವಂತೆ ನೋಡಿಕೊಳ್ಳಬೇಕು. ೫೦-೭೫% ನೇರಳೆ ಬಲೆ ಹೊದೆಸಿದ ಚಪ್ಪರ ಅನುಕೂಲಕರ. ಚಪ್ಪರದೊಳಗಡೆ ಅಧಿಕ ತೆವಾಂಶ ಮತ್ತು ಸಾಮಾನ್ಯ ಉಷ್ಣತೆಯನ್ನು ಕಾದುಕೊಳ್ಳಲು ಸಾಕಷ್ಟು ನೀರು ಹನಿಸುತ್ತಿರಬೇಕು. ಇದು ಉತ್ತಮ ರೀತಿಯಲ್ಲಿ ಕುಡಿಯೊಡೆಯಲು ಸಹಾಯಕ. ೨೦ ದಿನಗಳ ಬಳಿಕ ಪ್ಲಾಸ್ಟಿಕ್ ಗೂಡಿನ ತಳಭಾಗ ಸ್ವಲ್ಪ ಮೇಲಕ್ಕೆ ಏರಿಸಿ ಗಾಳಿಯಾಡುವಂತೆ ಮಾಡಿದಲ್ಲಿ ಬೆಳೆವಣಿಗೆಗೆ ಅನುಕೂಲ. ಕೊಟ್ಟೆಗಳಲ್ಲಿ ನೀರು ನಿಲ್ಲುವಷ್ಟು ಅತಿಯಾದ ಪ್ರಮಾಣದಲ್ಲಿ ನೀರು ಹಾಕಬಾರದು.
೩-೪ ತಿಂಗಳ ವಯಸ್ಸಿನ, ೩-೪ ಎಲೆಗಳನ್ನು ಹೊಂದಿದ ಕುಡಿಗಳನ್ನು ಮೇ - ಜೂನ್ ತಿಂಗಳುಗಳಲ್ಲಿ ನೆಡಬಹುದು. ತೇವಾಂಶ ಹೆಚ್ಚು ಇರುವಲ್ಲಿ ಸೆಪ್ಟೆಂಬರ್ ಮೊದಲನೇ ವಾರದಲ್ಲೂ ನಾಟಿ ಮಾಡಬಹುದು.
ಬುಡ ಕೊಳೆ ರೋಗ ನಿರೋಧಕ ಮೆಣಸಿನ ಬಳ್ಳಿಗಳನ್ನು ತಯಾರಿಸಲು ಹಿಪ್ಪಲಿ ಗಿಡದ ಬುಡಕ್ಕೆ ಮೆಣಸಿನ ಬಳ್ಳಿಯನ್ನು ಕಸಿ ಮಾಡುವುದು ಒಂದು ಪರ್ಯಾಯ ವಿಧಾನ. ಆ ವಿಧಾನವನ್ನು ಅರಿಯಲು ನೋಡಿ : ಹಿಪ್ಪಲಿ ಕಸಿ ವಿಧಾನ
ಸಸಿಮಡಿಯಲ್ಲಿ ರೋಗ ಮತ್ತು ಕೀಟಭಾದೆ ತಡೆಯುವ ಕ್ರಮಗಳು:
ನೋಡಿ: ರೋಗ ಮತ್ತು ಕೀಟ ನಿರ್ವಹಣೆ
ಮುಖಪುಟ .... ಹಿಂದೆ ಹೋಗಿ